April 18, 2015

ಕರಾವಳಿ ಜನರೇಕೆ ಬುದ್ಧಿವಂತರು?

||ಶ್ರೀ ಗುರುಭ್ಯೋ ನಮಃ||
ಪಶ್ಚಿಮ ಕರಾವಳಿಯ ಪ್ರದೇಶಗಳು ಬುದ್ಧಿವಂತರ ನಾಡು ಎಂದು ಕರೆದುಕೊಳ್ಳುವ ಹಿಂದಿನ ಕಾರಣಗಳ ಬಗ್ಗೆ ನನ್ನ ಸೀಮಿತ ಜ್ಞಾನದಿಂದ ಚಿಂತಿಸಿದಾಗ ದೊರೆತ  ಉತ್ತರಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಇಷ್ಟಪಡುತ್ತೇನೆ. ಇದರ ಬಗ್ಗೆ ಪ್ರಾಜ್ಞರು ಹೆಚ್ಚಿನ ಬೆಳಕು ಚೆಲ್ಲಬೇಕಾಗಿಯೂ ಕೋರುತ್ತೇನೆ.

. ಅತಿಯಾದ ತೆಂಗಿನ ಬಳಕೆ - ಕರಾವಳಿಯ ಜನ ಪ್ರಪಂಚದ ಅತೀ ಹೆಚ್ಚು ತೆಂಗಿನ ಬಳಕೆದಾರರು. ತೆಂಗಿಗೆ "ಕಲ್ಪವೃಕ್ಷ" ಎಂಬುದು ಅನ್ವರ್ಥ ನಾಮ. ತೆಂಗಿನ ಕಾಯಿಯನ್ನು ಗಣೇಶನ  ಅಪರಾವತಾರದಂತೆ ಕಾಣಲಾಗುತ್ತದೆ ಮತ್ತು ಪೂಜಿಸಲಾಗುತ್ತದೆ. ದಿನವಹಿ ಆಹಾರದಲ್ಲಿ ಇದನ್ನು ಪ್ರಮುಖವಾಗಿ ಬಳಸುತ್ತಾರೆ. "ಇಂಗು ಮತ್ತು ತೆಂಗು ಇದ್ದರೆ ಮಂಗ ಕೂಡ ಅಡುಗೆ ಮಾಡುತ್ತದೆ" ಎಂಬ ನಾಣ್ಣುಡಿ ಅಡುಗೆಯಲ್ಲಿ ತೆಂಗಿನ ಪ್ರಾಮುಖ್ಯತೆಯನ್ನು ತೋರಿಸುತ್ತದೆ. ಇನ್ನು "ಕೊಬ್ಬರಿ ಎಣ್ಣೆ" ಹಾಗೂ "ತೆಂಗಿನ ಎಣ್ಣೆ" (ಹಸಿ ತೆಂಗಿನ ಕಾಯಿಯಿಂದ ತಯಾರಿಸಿದ್ದು) ಗಳು ಪ್ರಪಂಚದ ಅತ್ಯುತ್ತಮ ಎಣ್ಣೆಗಳ ಸಾಲಲ್ಲಿ ಪರಿಗಣಿಸಲ್ಪತ್ತಿವೆ. ಶೂನ್ಯ ಶೇಖಡ ಕಾಲೆಸ್ಟಿರೊಲ್ ಇವುಗಳ ಹೆಗ್ಗಳಿಗೆ (ಕಾಲೆಸ್ಟಿರೊಲ್ ಎಂಬ ಭೂತ ಹೆಚ್ಚಾಗಿ ಕಾಡುವುದು ಕಾದ ಎಣ್ಣೆಯನ್ನು ಪುನಃ ಪುನಃ ಕಾಯಿಸುವುದರಿಂದ ಮಾತ್ರ). ಎಳೆನೀರು ಮತ್ತು ಬಾವೆ (ಎಳೆ ತೆಂಗಿನ ಒಳ ಪದರ) ಅಮೃತ ಸಮಾನ. ಇದರಲ್ಲಿನ ಖನಿಜ, ಲವಣ, ಜೀವಸತ್ವ, ಪೋಷಕಾಂಶಗಳು ಜಗತ್ತಿನ ಅತ್ಯುತ್ತಮ ಪೇಯವನ್ನೂ ಹಿಂದಿಕ್ಕಿ ಮೊದಲ ಸಾಲಲ್ಲಿ ನಿಲ್ಲುತ್ತವೆ. ಇನ್ನು ತೆಂಗಿನ ಕಾಯಿಯಿಂದ ತೆಗೆದ ಹಾಲನ್ನು ಅನೇಕ ಖಾದ್ಯಗಳಲ್ಲಿ ಬಳಸಲಾಗುತ್ತದೆ. ಸಂಶೋಧನೆಗಳು ಇದರಲ್ಲಿನ ಪೋಷಕಾಂಶಗಳನ್ನು ತಾಯಿಯ ಹಾಲಿಗೆ ಹೊಲಿಸುತ್ತವೆ. ಇನ್ನು ನಮ್ಮಲ್ಲಿ ಎಣ್ಣೆ ತೆಗೆದ ಬಳಿಕ ಉಳಿಯುವ ಹಿಂಡಿಯನ್ನೂ ಖಾದ್ಯವಾಗಿ ಉಪಯೋಗಿಸುತ್ತಾರೆ ಸ್ವಾಮೀ ! ಅಷ್ಟೇ ಏಕೆ, ಸಿಯಾಳದ ಒಳಗಿನ ತೊಗಟೆ (ಕರ್ಕು), ಮೊಳಕೆ, ನೀರಾ ಇತ್ಯಾದಿಗಳನ್ನೂ ಇಷ್ಟಪಟ್ಟು ತಿನ್ನುತ್ತಾರೆ.


ತೆಂಗಿನ ಕಾಯಿಯಲ್ಲಿನ ಪೌಷ್ಟಿಕತೆಯು ಅದರ ಬೆಳವಣಿಗೆಯ ವಿವಿಧ ಹಂತಗಳಲ್ಲಿ ಬೇರೆ ಬೇರೆ ಗುಣ-ಸ್ವಭಾವವನ್ನು ಹೊಂದಿರುವುದು ಒಂದು ವಿಶೇಷವಾಗಿದೆ. ಎಳೆನೀರಿನ ಒಳಗಿನ ಎಳೆ ಕಾಯಿ, ಬಲಿತ ತೆಂಗು ಹಾಗೂ ಕೊಬ್ಬರಿ ಹೀಗೆ ಮೂರು ಹಂತಗಳಲ್ಲಿ ಮಾನವ ದೇಹಕ್ಕೆ ಬೇಕಾದ ಸಕಲ ಪೋಷಕಾಂಶಗಳನ್ನೂ ನೀಡುತ್ತದೆ ಈ ಕಲ್ಪವೃಕ್ಷ. ಈ ರೀತಿಯ ಅತಿಯಾದ ತೆಂಗಿನ ಬಳಕೆಯು ಕರಾವಳಿಯಲ್ಲಿ ಮಾತ್ರ ಕಂಡುಬರುವುದು ಅವರ ಬುದ್ಧಿಮತ್ತೆಗೂ ತೆಂಗಿಗೂ ಇರುವ ಸಂಬಂಧವನ್ನು ಎತ್ತಿ ತೋರಿಸುತ್ತದೆ. ಇದರ ಬಗ್ಗೆ ವೈಜ್ಞಾನಿಕ  ಸಂಶೋಧನೆಗಳು ಇನ್ನಷ್ಟೇ ನಡೆಯಬೇಕಿದೆ. 

. ಶಿವ-ಶಿವೆಯರ ದೇವಸ್ಥಾನಗಳು - ಕರಾವಳಿಯಲ್ಲಿ ಗ್ರಾಮಕ್ಕೊಂದರಂತೆ ಮಹಾಲಿಂಗೇಶ್ವರ ದೇವಸ್ಥಾನವನ್ನು ಕಾಣಬಹುದು. ಶಿವ ಅಲ್ಲದಿದದ್ದರೆ ಅವನ ಮಕ್ಕಳಾದ ಗಣೇಶ -ಸುಬ್ರಹ್ಮಣ್ಯರ ಇಲ್ಲವೇ ಶಿವೆ (ಅಮ್ಮನವರು) ಯ ದೇವಸ್ಥಾನಗಳನ್ನು ಕಾಣಬಹುದು. ಇಷ್ಟೇ ಅಲ್ಲದೆ "ದುರ್ಗಾ ಪರಮೇಶ್ವರಿ" ಎಂಬ ಅಭಿದಾನದಿಂದ ಮಹಾನ್ ಪುಣ್ಯ ಕ್ಷೇತ್ರಗಳು ಕರಾವಳಿಯಾದ್ಯಂತ ವ್ಯಾಪಿಸಿವೆ.

ಲಿಂಗರೂಪಿ ಪರಮಾತ್ಮನ ಹಾಗೂ ಪರಮೇಶ್ವರಿಯ ಆರಾಧನೆಗಳು "ಪ್ರಕೃತಿ-ಪುರುಷ" ಕಲ್ಪನೆಯ ಪ್ರತಿರೂಪವಾಗಿದ್ದು ಇಲ್ಲಿಯ ಜನರಲ್ಲಿ ಜೀವನೋತ್ಸಾಹ ತುಂಬಲು ಕಾರಣವಾಗಿವೆ. ಸಂಬಂಧ ನಡೆಯುವ ನಿತ್ಯಪೂಜೆ, ಬಲಿ, ಭಜನೆ, ದಾಸೋಹ ಇತ್ಯಾದಿಗಳೂ ದಿನವೂ ಜನರ ಕರ್ತವ್ಯ ಪ್ರಜ್ಞೆಯನ್ನು ಎಚ್ಚರಿಸಿದರೆ, ವಾರ್ಷಿಕ ಜಾತ್ರೆ, ದೀಪೋತ್ಸವ, ರಥೋತ್ಸವಗಳು ಹೊಸ ಹುಮ್ಮಸ್ಸನ್ನು ಉಂಟು ಮಾಡುತ್ತವೆ.  ಜನರ ಮಾನಸಿಕ ಬೆಳವಣಿಗೆಗೆ ಇವು ಬಹಳ ಸಹಕಾರಿಯಾಗಿವೆ. ಹೀಗೆ ಕರಾವಳಿ ಜನರ ಬೌದ್ದಿಕ ಹಾಗೂ ಮಾನಸಿಕ ಬೆಳವಣಿಗೆಗಳಲ್ಲಿ ಸಂಪ್ರದಾಯಬದ್ಧವಾಗಿ ನಡೆಯುವ ಆಚರಣೆಗಳು ತುಂಬಾ ಸಹಾಯಕ. 


. ಭೂತಾರಾಧನೆ - ಇದು ಕರಾವಳಿ ಜನರ ವಿಶಿಷ್ಟ ಹಾಗೂ ಸಾಂಪ್ರದಾಯಿಕ ಆಚರಣೆ. ನಮ್ಮ ಪೂರ್ವಜರಲ್ಲಿ ಕೆಲವರು ಸಮಾಜದ ಒಳಿತಿಗಾಗಿ ತಮ್ಮ ಸಂಪೂರ್ಣ ಜೀವನವನ್ನೇ ಮುಡಿಪಾಗಿಟ್ಟು ಹೋರಾಡಿ ದೈವತ್ವವನ್ನು ಪಡೆದರು. ಹೀಗೆ ದೈವತ್ವವನ್ನು ಪಡೆದ ಮಹಾಪುರುಷರನ್ನೇ ಭೂತ (ದೈವ) ಎಂದು ಆರಾಧಿಸುವ ಪರಿಪಾಠ ಬೆಳೆಯಿತು. ನಮ್ಮ ಪೂರ್ವಜರ ಧೈವಿಕ ಅಂಶಗಳನ್ನು ಶ್ರಾದ್ಧಾದಿ ಆಚರಣೆಗಳ ಮೂಲಕ ಪೂಜಿಸುವಂತೆ ಈ ಮಹಾಪುರುಷರನ್ನು ನೇಮ, ಕೋಲ ಇತ್ಯಾದಿಗಳ ಮೂಲಕ ಪೂಜಿಸುವುದೇ ಭೂತಾರಾಧನೆ ಎನ್ನಿಸಿಕೊಂಡಿದೆ.

ಒಂದೊಂದು ಧೈವವೂ ಒಂದೊಂದು ದಾರಿಯ ಮೂಲಕ ಸಾಧಕರಾದವರು. ಉದಾಹರಣೆಗೆ  ಸತ್ಯ, ನ್ಯಾಯ, ಧರ್ಮ, ಶೌರ್ಯ ಇತ್ಯಾದಿ. ಕರಾವಳಿಯ ಪ್ರತಿಯೊಂದು ಕುಟುಂಬವೂ ಇಂತಹ ಒಬ್ಬ ಆದರ್ಶ ಪುರುಷನನ್ನು ಮಾದರಿಯಾಗಿ ಇಟ್ಟುಕೊಂಡು ಜೀವನ ಸಾಗಿಸುತ್ತಿರುವಂತೆ ಭಾಸವಾಗುತ್ತವೆ. ಹೀಗಾಗಿ ಭೂತಾರಧನೆಯಲ್ಲಿ ಬರುವ ಆಚರಣೆಗಳಿಂದ ವ್ಯಕ್ತಿಯು ಸದಾಚಾರ ಸಂಪನ್ನನಾಗಿ ಬೆಳೆಯಲು ಸಾಧ್ಯ. ಇಂತಹ ಸಾನ್ನಿಧ್ಯಗಳು ಕರಾವಳಿಯ ಜನರು ಸನ್ಮಾರ್ಗದಲ್ಲಿ ನಡೆಯುವಂತೆ ಪ್ರೇರೇಪಿಸುತ್ತವೆ. ಹೀಗೆ ಧೈವ-ದೇವತಾ ಆರಾಧನಾ ಕೇಂದ್ರಗಳು ಕರಾವಳಿ ಜನರ ಭಯ-ಭಕ್ತಿಯ ಸೆಲೆಯಾಗಿವೆ.    


. ನಾಗಾರಾಧನೆ - ಇದು ಕರ್ನಾಟಕ ಕರಾವಳಿಯ ವಿಶಿಷ್ಟ ಆರಾಧನೆ. ಈ ಪ್ರದೇಶದಲ್ಲಿ ಮನಸ್ಸುಗಳ ಮೇಲೆ ಹಿಡಿತ ಸಾಧಿಸಿ ದಬ್ಬಾಳಿಕೆಯ ಆಳ್ವಿಕೆ ನಡೆಸುತ್ತಿದ್ದ "ನಾಗಾ" ಗಳ ಕಪಿ ಮುಷ್ಠಿಯಿಂದ ಹೊರಬರುವ ಪ್ರಯತ್ನದಿಂದಾಗಿ ಬಳಕೆಗೆ ಬಂದ ಆಚರಣೆಯೇ ನಾಗಾರಾಧನೆ. ನಾಗಾ ಎಂದರೆ ಮನಸ್ಸು ಎಂದರ್ಥ. ನಾಗಾ ಜನಾಂಗದ ದುಷ್ಟ ಆಳ್ವಿಕೆ ಕೊನೆಗೊಳಿಸಿ ಸನಾತನ ಧರ್ಮದ ಪುನರುತ್ಥಾನಕ್ಕಾಗಿ ಹೋರಾಡಿದ ಶ್ರೀ ಅಣ್ಣಪ್ಪಯ್ಯನವರು ಕಂಬಳ ನಾಗಸೂತ್ರವನ್ನು ರಚಿಸಿ, ಚಿತ್ತ ಚಂಚಲತೆಯನ್ನು ನೀಗಿಸಿ, ಸಹೋದರತೆಯನ್ನು ಪ್ರತಿಪಾದಿಸುವ "ಭಾಗವತ" ಸಂಪ್ರದಾಯವನ್ನು ನಮಗೆ ನೀಡಿದರು. 

 ಮುಂದೆ ನಾಗಾರಾಧನೆಯು ಹಿಡಿತದಲ್ಲಿರಲು ಶರವಣಭವ ಸೂತ್ರವನ್ನು ಸಾಧಿಸಿ ನಾಗ ಮತ್ತು ಸುಬ್ರಹ್ಮಣ್ಯ (ಅಂದರೆ ಚಿತ್ತ + ಜ್ಞಾನ) ರಲ್ಲಿ ಏಕತೆಯನ್ನು ತಂದರು. ಅಂದಿನಿಂದಲೇ ಈ ಪರಶುರಾಮ ಸೃಷ್ಟಿಯಲ್ಲಿ ಸರ್ಪ ಸಂಸ್ಕಾರ, ಆಶ್ಲೇಷ ಬಲಿ, ನಾಗಮಂಡಲ ಮುಂತಾದ ಆಚರಣೆಗಳು ಹುಟ್ಟಿ, ಉಳಿದು, ಬೆಳೆದು ಬಂದಿವೆ. ಯಾವ ಬುದ್ಧಿಯೂ ಕೂಡಾ ಉತ್ತಮ ಕೆಲಸಕ್ಕೆ ವಿನಿಯೋಗವಾಗಲು ಮೊದಲು ಒಳ್ಳೆಯ ಮನಸ್ಸು ಮಾಡುವುದು ಅತ್ಯಗತ್ಯ. ಇದಕ್ಕೆ ನಾಗಾರಾಧನೆ ಸಹಕಾರಿ. 

. ಸಹ್ಯಾದ್ರಿಯ ಸಂಪತ್ತು - ಸಹ್ಯಾದ್ರಿಯ ಖನಿಜ ಹಾಗೂ ಸಸ್ಯ ಸಂಪತ್ತುಗಳಿಗೂ ಕರಾವಳಿ ಜನರ ಬುದ್ಧಿಮತ್ತೆಗೂ ನೇರ ಸಂಬಂಧವಿದೆ. ಮಳೆಗಾಲದಲ್ಲಿ ಸಹ್ಯಾದ್ರಿಯಿಂದ ಹರಿದು ಬರುವ ನೀರಿನ ಜೊತೆ ಬರುವ ಖನಿಜಗಳು ಹಾಗೂ ವನಸ್ಪತಿಗಳು ಸಾಗರವನ್ನು ಸೇರುತ್ತವೆ. ಅವುಗಳನ್ನು ತಿಂದು ಬೆಳೆಯುವ ಮೀನುಗಳು ಹಾಗೂ ಅವನ್ನು ತಿನ್ನುವ ಕರಾವಳಿಗ ಈ ಸತ್ವಗಳನ್ನು ತನ್ನದಾಗಿಸಿಕೊಳ್ಳುತ್ತಾನೆ. ಹೀಗೆ ಹಲವು ವಿಶಿಷ್ಟ ಪೋಷಕಾಂಶಗಳ ಸಾರ ಮೀನಿನ ಮುಖಾಂತರ ಮನುಷ್ಯನನ್ನು ತಲುಪುತ್ತವೆ. ಒಂದು ಕಾಲದಲ್ಲಿ ನಿಸ್ಸಾರವಾಗಿ, ಏನನ್ನೂ ಬೆಳೆಯಲು ಅಯೋಗ್ಯವೆನ್ನಿಸಿದ್ದ ಈ ಭೂಮಿಯಲ್ಲಿ ಮೀನಿನ ಕೃಷಿಯನ್ನು ಸಂಶೋಧಿಸಿ ಜನರಿಗೆ ನೀಡಿದವರು "ಅಗಸ್ಥ್ಯರು". ಇಂಥ ಮೀನಿನ ಬೆಳೆಯನ್ನು ಸಸ್ಯಾಹಾರ ಎಂದು ಪರಿಗಣಿಸಲಾಗುತ್ತಿತ್ತು.

ಅದೇನೇ ಇರಲಿ, ಕೇವಲ ಬಾಯಿರುಚಿಗೆ ಅಲ್ಲದೆ ಔಷಧಿ ಎಂದು ಬಳಸುವ ಪ್ರತಿಯೊಂದು ಆಹಾರಪದಾರ್ಥವೂ ಸಸ್ಯಾಹಾರಕ್ಕೆ ಸಮನಲ್ಲವೇ! ಇನ್ನು ಸಹ್ಯಾದ್ರಿಯ ದೆಸೆಯಿಂದ ಉಂಟಾಗಿರುವ ಅತಿ ವಿಶಿಷ್ಟ ಹವಾಮಾನ (ಅತೀ ಹೆಚ್ಚೆನಿಸುವ ಮಳೆ, ಚಳಿ ಮತ್ತು ಬಿಸಿಲು) ಇಲ್ಲಿನ ಜನರನ್ನು ಚುರುಕಾಗಿರುವಂತೆ ಮಾಡಿದೆ. ಅದಕ್ಕೆ ತಕ್ಕುದಾದ ಪರಿಸರವೂ ರೂಪುಗೊಂಡು ವಿಶಿಷ್ಟ ತಳಿಯ ಜನರ ಉಗಮಕ್ಕೆ ಕಾರಣವಾಗಿದೆ.  


. ಯಕ್ಷಗಾನ - ಇದರ ಉಗಮವಾದದ್ದೇ ಜನರಿಗೆ ಶಿಕ್ಷಣ ನೀಡುವ ಉದ್ದೇಶದಿಂದ. ನೈತಿಕ ಬೋಧನೆಗಾಗಿ ಆಯ್ದ ಪೌರಾಣಿಕ ಪ್ರಸಂಗಗಳನ್ನು ಪ್ರದರ್ಶಿಸಲಾಗುತ್ತಿತ್ತು. ಅಸತ್ಯದ ಮೇಲೆ ಸತ್ಯದ ಜಯ, ಅಧರ್ಮದ ಮೇಲೆ ಧರ್ಮದ ವಿಜಯದಂತಹ ಸಂದರ್ಭಗಳನ್ನು ಗಾನ, ನಾಟ್ಯ, ಅರ್ಥಗಾರಿಕೆ, ವೇಷ ಭೂಷಣಗಳ ಮೂಲಕ ಪ್ರದರ್ಶಿಸಿ ಜನರ ಮನಸ್ಸಿನಲ್ಲಿ ಆಳವಾಗಿ ಬೇರೂರುವಂತೆ ಮಾಡಲಾಗುತ್ತಿತ್ತು. ಇನ್ನಿತರ ಕಲೆಗಳಾದ ಹರಿಕಥೆ, ತಾಳಮದ್ದಲೆ, ಹೂವಿನ ಕೋಲುಗಳೂ ಕೂಡ ಜ್ಞಾನವೃದ್ಧಿಗೆ ಪೂರಕವಾಗಿ ಕೆಲಸ ಮಾಡುತ್ತವೆ.

ಕೇವಲ ಯಕ್ಷಗಾನ ಒಂದರಿಂದಲೇ ಮಹಾಕಾವ್ಯಗಳ, ಪುರಾಣ-ಉಪ ಪುರಾಣಗಳ, ಇನ್ನಿತರ ಪ್ರಮುಖ ಸಾಹಿತ್ಯಗಳ ಪರಿಚಯ ಸಾಮಾನ್ಯ ಜನರಿಗೂ ಆಗುತಿತ್ತು. ಯಾವುದೇ ಆಧುನಿಕ ಶಿಕ್ಷಣ ವಿಧಾನವೂ, ಪಠ್ಯಕ್ರಮವೂ ಇದಕ್ಕೆ ಸಾಟಿಯಾಗಲಾರದು. ಆಧುನಿಕ ಶಿಕ್ಷಣ ನೀಡಲಾರದಂತಹ ಸಂಸ್ಕಾರಗಳನ್ನು ಯಕ್ಷಗಾನ ಕಲಿಸಿಕೊಡಬಲ್ಲದು. ಇದರಿಂದ ಸಾಂಸ್ಕೃತಿಕ ಔನ್ನತ್ಯವನ್ನು ಸಾಧಿಸಬಹುದು. ಹೀಗೆ ಯಕ್ಷಗಾನವು ವಿಶ್ವಕ್ಕೆ ಕರಾವಳಿ ಕರ್ನಾಟಕವು ನೀಡಿರುವ ವಿಶಿಷ್ಟವಾದ ಕೊಡುಗೆ. 


. ರತ್ನಾಕರ - ರತ್ನಾಕರ (ಅರಬ್ಬೀ ಸಮುದ್ರ) ದಿಂದ ಉತ್ಪಾದನೆಯಾಗುವ ಉಪ್ಪು ಜಗತ್ತಿನ ಸರ್ವಶ್ರೇಷ್ಠ ಆಹಾರ ಉತ್ಪನ್ನ.

ಸಹ್ಯಾದ್ರಿಯಿಂದ ಹರಿದುಬರುವ ನದಿಗಳು ತರುವ ಸಾರವನ್ನು ತನ್ನ ಅಲೆಗಳ ಮೂಲಕ ಸಂಸ್ಕರಿಸಿ ರತ್ನಾಕರ ನೀಡುವ ಪ್ರತಿಯೊಂದು ಲವಣದ ಕಣವೂ ಶಿವ ಲಿಂಗದಷ್ಟೇ ಪೂಜ್ಯ. ಇದನ್ನು ಬಳಸಿ ತಯಾರಾದ ಆಹಾರವು ಸದ್ಬುದ್ಧಿ, ಸದಾಚಾರಗಳನ್ನು ಪ್ರೇರೇಪಿಸುತ್ತದೆ. ಇದರ ಬಗ್ಗೆ ವಿವರವಾಗಿ ಗುರುಗಳ "ಲವಣ ವೃತ" ಪುಸ್ತಕದಲ್ಲಿ ಬರೆಯಲಾಗಿದೆ. ಹೀಗಾಗಿ ರತ್ನಾಕರನೂ ಒಂದು ರೀತಿಯಲ್ಲಿ ಇಲ್ಲಿನ ಜನರ ಬೌದ್ಧಿಕ ಉನ್ನತಿಗೆ ಕಾರಣನಾಗಿದ್ದಾನೆ. 


. ಸುಬ್ರಹ್ಮಣ್ಯ ದೇವಸ್ಥಾನಗಳು - ಶಿವ ಎಂದರೆ ಪೂರ್ಣ, ಶೂನ್ಯ ಅಥವಾ ಲಿಂಗ. ಅಂತಹ ಪೂರ್ಣದ ೬ ಭಾಗಗಳು ಗಿರಿಜಾ, ಗಂಗಾ, ಚಂದ್ರ, ನಾಗ, ಗಣಪತಿ (ಪ್ರಕೃತಿ) ಮತ್ತು ಸುಬ್ರಹ್ಮಣ್ಯ (ಜ್ಞಾನ).

ಇಂತಹ ಜ್ಞಾನ ಭಾಗವಾದ ಸುಬ್ರಹ್ಮಣ್ಯನ ಆರಾಧನೆ ಕರಾವಳಿ ಆದ್ಯಂತ ಕಂಡುಬರುತ್ತದೆ. ಮೂಲಕ ಸ್ವೇಚ್ಛಾ ಪ್ರವೃತ್ತಿಯ, ಉನ್ಮಾದಾವಸ್ಥೆಯಲ್ಲಿರುವ  ಮನಸ್ಸನ್ನು (ನಾಗ) ಹಿಡಿತದಲ್ಲಿಡಲು ಸುಬ್ರಹ್ಮಣ್ಯ ಸೂತ್ರವನ್ನು ಬಳಸಲಾಗುತ್ತದೆ. ಇಲ್ಲಿನ ಜನರು ಜ್ಞಾನದ ವೈಪರೀತ್ಯದಿಂದಾಗಿ ಕೆಟ್ಟ ದಾರಿಯನ್ನು ತುಳಿಯದೇ ಇರಲು ಇದು ಬಲು ಮುಖ್ಯ ಕಾರಣ ಎಂದು ನನ್ನ ಅನಿಸಿಕೆ. 


. ಕುಚ್ಚಿಗೆ ಅಕ್ಕಿ - ಇದು ಕರಾವಳಿ ಜನರ ವಿಶಿಷ್ಟ ಆಹಾರ ಪದಾರ್ಥ. ಭತ್ತವನ್ನು ಬೇಯಿಸಿ ಅದರ ಒಳಗಿನ ಪದರವನ್ನು ಅಕ್ಕಿಯೊಂದಿಗೆ ಉಳಿಸುವ ಮೂಲಕ ಈ ರೀತಿಯ ಅಕ್ಕಿಯನ್ನು ತಯಾರಿಸಲಾಗುತ್ತದೆ. ಯಾವುದೇ ಉಪ ಪದಾರ್ಥಗಳ ಅಗತ್ಯವಿಲ್ಲದೆ ಕೇವಲ ಗಂಜಿಗೆ ಉಪ್ಪನ್ನೂ, ಉಪ್ಪಿನ ಕಾಯಿಯನ್ನೂ ಹಾಕಿ ಸೇವಿಸಬಹುದು.

ಕೆಲವು ದಶಕಗಳ ಹಿಂದೆ ಕರಾವಳಿಯ ಮನೆಗಳಲ್ಲಿ ದಿನವೂ ಬೆಳಿಗ್ಗೆ ಕೇವಲ ಹಬ್ಬ ಹರಿದಿನಗಳಲ್ಲಿ ಮಾತ್ರ ತಿಂಡಿ ಮಾಡುವ ಕ್ರಮವಿದ್ದರೆ ಉಳಿದ ಎಲ್ಲಾ ದಿನ ಗಂಜಿಯನ್ನೇ ಉಣ್ಣುತ್ತಿದ್ದರು. ಅಕ್ಕಿಯ ವಿಶೇಷತೆ ಎಂದರೆ ಅದರ ಮೇಲ್ಮೈಯಲ್ಲಿರುವ ವಿಶಿಷ್ಟ ಪ್ರೋಟೀನಿನ ಅಂಶ. ಇದು ಅಕ್ಕಿಗೆ ವಿಶಿಷ್ಟ ಸ್ವಾದವನ್ನು ನೀಡುವುದಲ್ಲದೆ ದೇಹಕ್ಕೂ ತಂಪು ಹಾಗೂ ಪೌಷ್ಟಿಕಾಂಶಭರಿತ. ವ್ಯಕ್ತಿಯ ಬೌದ್ಧಿಕ ವಿಕಾಸದ ಮೇಲಿನ ಇದರ ಪರಿಣಾಮಗಳ ಅಧ್ಯಯನ ಇನ್ನೂ ನಡೆಯಬೇಕಷ್ಟೇ.    


೧೦. ವಿಶಿಷ್ಟ ತರಕಾರಿಗಳು - ಕರಾವಳಿಯಲ್ಲಿ ಬೆಳೆಯುವ ತರಕಾರಿಗೂ, ಇತರ ಪ್ರದೇಶಗಳ ತರಕಾರಿಗೂ ಇರುವ ಭೌತಿಕ ವ್ಯತ್ಯಾಸಗಳು (ಬಣ್ಣ, ಆಕಾರ ಇತ್ಯಾದಿ) ನನ್ನಲ್ಲಿ ಹಲವಾರು ಬಾರಿ ಕುತೂಹಲವನ್ನು ಹುಟ್ಟು ಹಾಕಿವೆ. ಹೆಚ್ಚಿನ ಎಲ್ಲಾ ಬಗೆಯ ತರಕಾರಿಗಳಲ್ಲಿ ಈ ವ್ಯತ್ಯಾಸಗಳು ಕಂಡು ಬರುತ್ತವೆ. 

ಕೆಲವು ರುಚಿಯಲ್ಲಿ ಮಾತ್ರ ಸಾಮ್ಯತೆ ತೋರಿದರೆ ಅವುಗಳಲ್ಲಿನ ಭೌತಿಕವಾದ ವ್ಯತ್ಯಾಸಗಳು ಅಗಾಧ. ಉದಾಹರಣೆಗೆ ಕುಂಬಳ ಕಾಯಿ, ಬದನೆ ಕಾಯಿ, ಸೌತೆ ಕಾಯಿ, ಇಬ್ಬುಳ್ಳೆ, ಕಲ್ಲಂಗಡಿ ಹಣ್ಣು ಇತ್ಯಾದಿ. ಇನ್ನು ಊರಿನ ತೊಂಡೆ, ಅಲಸಂದೆ, ಪಡವಲ, ಹೀರೆ, ಮಟ್ಟು ಗುಳ್ಳ, ಸೊಪ್ಪುಗಳ ರುಚಿಯನ್ನು ಉಂಡವನೇ ಬಲ್ಲ.  ವ್ಯತ್ಯಾಸಗಳಿಗೆ ಮಣ್ಣಿನ ಗುಣ ಕಾರಣ ಎಂದಾದರೆ, ಮಣ್ಣಿನ ಗುಣವೇ ಇಲ್ಲಿನ ಜನರನ್ನು ಇತರರಿಂದ ಬೇರೆಯಾಗಿಸಿದೆ ಅನ್ನಬಹುದೇ?   


೧೧. ಕಂಬಳ - ಇದೊಂದು ವಿಶಿಷ್ಟ ಜನಪದ ಆಚರಣೆಯಾದರೂ ಸಂಪೂರ್ಣ ವೈಜ್ಞಾನಿಕ ತಳಹದಿಯ ಮೇಲೆ ನಿಂತಿದೆ. ಕೋಣರೂಪದ ವಿಕೃತ ಮನಸ್ಸನ್ನು ದಂಡಿಸುವ ವಿಧಾನವೇ ಕಂಬಳ.

ಹಿಂದೆ ಅರಸರ ಆಳ್ವಿಕೆಯಲ್ಲಿ ಕೋಣದಂತಹ ದುರ್ಗುಣ ಮನಸ್ಸಿನ ಮನುಷ್ಯನನ್ನು ದಂಡಿಸಿ ಸರಿದಾರಿಗೆ ತರಲು ಕಂಬಳವನ್ನು ಬಳಸುತ್ತಿದ್ದರು. ಮುಂದೆ ಇದೇ ಸಾಂಕೇತಿಕವಾಗಿ ಕೋಣಗಳನ್ನು ಓಡಿಸುವ ಕ್ರೀಡೆಯಾಗಿ ಪರಿವರ್ತನೆಗೊಂಡಿರಬಹುದು. ಮನಸ್ಸಿನ ನಿಯಂತ್ರಣದ ದ್ಯೋತಕವಾದ ಕಂಬಳವು ಒಂದು ರೀತಿಯಲ್ಲಿ ಜ್ಞಾನ ಪ್ರಚೋದಕವೆಂದರೆ ತಪ್ಪಾಗಲಾರದು.
೧೨. ಸಂಪ್ರದಾಯದ ಮುಂದುವರಿಕೆ - ಹಿರಿಯರು ನಡೆಸಿಕೊಂಡು ಬಂದಂತಹ ಆಚರಣೆಗಳನ್ನೂ, ಸಂಪ್ರದಾಯವನ್ನೂ ಉಳಿಸಿ ಬೆಳೆಸಿಕೊಂಡು ಬಂದದ್ದು ಕರಾವಳಿ ಜನರ ಹೆಗ್ಗಳಿಕೆ.


ಆಧುನಿಕ ಜೀವನದಲ್ಲಿ ಈ ಸಂಪ್ರದಾಯಗಳನ್ನು ಕಸಿ ಮಾಡಿ ಬದುಕುವಷ್ಟು ಬುದ್ದಿವಂತರು ಇಲ್ಲಿನ ಜನ. ಇಂತಹ ಮನೋಭಾವವೇ ಕರಾವಳಿಯನ್ನು ಸಾಂಸ್ಕ್ರತಿಕವಾಗಿ ಸಮೃದ್ಧ ಪ್ರದೇಶವನ್ನಾಗಿಸಿದೆ. ಇಂತಹ ಸಾಂಸ್ಕೃತಿಕ ನೆಲೆಗಟ್ಟೇ ಇಲ್ಲಿನ ಜನರ ಬುದ್ಧಿವಂತಿಕೆಗೆ ಕಾರಣ.

ಈ ೧೨ ವಿಷಯಗಳಲ್ಲಿ ೧೨ ಸಂಶೋಧನಾ ಪ್ರಬಂಧಗಳನ್ನೇ ಮಂಡಿಸಬಹುದು. ಅಷ್ಟು ಜನ ಪಿ.ಎಚ್.ಡಿ ಪದವಿ ಪಡೆಯಬಹುದು, ಅಷ್ಟೊಂದು ವಿಷಯಗಳಿವೆ ಇಲ್ಲಿ ಅಡಗಿವೆ. ಇಂತಹ ಸಂಶೋಧನೆಗಳು ಸಾಕಾರಗೊಂಡು ಉತ್ತಮ ನಾಗರಿಕ ಸಮಾಜದ ನಿರ್ಮಾಣವಾಗಲಿ ಎನ್ನುವುದೇ ಈ ಲೇಖನದ ಆಶಯವಾಗಿದೆ.